ಕಂಬದಕೋಣೆ:
ಶ್ರೀಮದ್ಭಗವದ್ಗೀತಾ ಜಯಂತಿ ಆಚರಣಾ ಸಮಿತಿಯು ಆಯೋಜಿಸಿದ್ದ ಪ್ರತಿಷ್ಠಿತ ಭಗವದ್ಗೀತಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ, ಕಂಬದಕೋಣೆ ಯು ಭವ್ಯ ಸಾಧನೆ ಮಾಡಿದೆ.
ಶಾಲೆಯ 8ನೇ ತರಗತಿಯ ‘ಸಿ’ ವಿಭಾಗದ ವಿದ್ಯಾರ್ಥಿಯಾದ ಕು. ಕಾರ್ತಿಕ್ ವಿ. ಶೆಟ್ಟಿ ಯವರು ತಮ್ಮ ಅಸಾಧಾರಣ ಜ್ಞಾನದಿಂದಾಗಿ ಮೊದಲು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, ನಂತರ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಯಶಸ್ಸಿನ ಪತಾಕೆ ಹಾರಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ವಿಶಿಷ್ಟ ಸಾಧನೆಯ ಮೂಲಕ ಕಾರ್ತಿಕ್ ವಿ. ಶೆಟ್ಟಿ ಇವರು ಇದೇ ತಿಂಗಳ 29ನೇ ತಾರೀಖಿನಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಭಗವದ್ಗೀತಾ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
ಕಾರ್ತಿಕ್ ಅವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಜ್ಞಾನದಲ್ಲಿ ತೋರಿದ ಆಸಕ್ತಿ ಹಾಗೂ ಪರಿಶ್ರಮಕ್ಕೆ ಈ ಗೆಲುವು ಉತ್ತಮ ಉದಾಹರಣೆಯಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.
ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯವರು ಕು. ಕಾರ್ತಿಕ್ ವಿ. ಶೆಟ್ಟಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ, ಅವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸುತ್ತಾ, ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.
